ಪೋಪ್ ಆಯ್ಕೆ ಪ್ರಕ್ರಿಯೆಗೂ ಮುನ್ನ ಬಲಿಪೂಜಾ ಸಮಯ ನಿಗಧಿಪಡಿಸಿದ ಕಾರ್ಡಿನಲ್ಲುಗಳು
ವರದಿ: ವ್ಯಾಟಿಕನ್ ನ್ಯೂಸ್
ಮಂಗಳವಾರ ಬೆಳಿಗ್ಗೆ ಕಾರ್ಡಿನಲ್'ಗಳ ಪರಿಷತ್ತು ತನ್ನ ಆರನೇ ಸಭೆಯನ್ನು ಹಮ್ಮಿಕೊಂಡು, ಈ ಸಭೆಯಲ್ಲಿ ಪೋಪ್ ಆಯ್ಕೆ ಪ್ರಕ್ರಿಯೆಯ ದಿನದಂದು ಯಾವ ಸಮಯಕ್ಕೆ ಬಲಿಪೂಜೆಯನ್ನು ಅರ್ಪಿಸಬೇಕು ಎಂಬುದನ್ನು ನಿಗಧಿಪಡಿಸಿದೆ.
ಈ ಸಭೆಯಲ್ಲಿ 124 ಮತದಾರ ಕಾರ್ಡಿನಲ್ಲುಗಳೂ ಸೇರಿದಂತೆ ಒಟ್ಟು 183 ಕಾರ್ಡಿನಲ್ಲುಗಳು ಹಾಜರಿದ್ದರು. ಇವರ ಪೈಕಿ ಸುಮಾರು ಮೂವತ್ತು ಕಾರ್ಡಿನಲ್ಲುಗಳು ಈ ಸಭೆಯಲ್ಲಿ ವಿವಿಧ ಚರ್ಚೆಯ ಭಾಗವಾಗಿದ್ದರು.
ಪ್ರಸ್ತುತ ಧರ್ಮಸಭೆಯ ಪ್ರಸಕ್ತ ವಿಷಯಗಳು, ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳ ಕುರಿತು ಕಾರ್ಡಿನಲ್ಲುಗಳು ಚರ್ಚಿಸಿದರು.
ವ್ಯಾಟಿಕನ್ ಮಾಧ್ಯಮ ಕಚೇರಿಯ ನಿರ್ದೇಶಕರಾದ ಮತ್ತಿಯೋ ಬ್ರೂನಿ ಅವರು ಆರೋಗ್ಯ ಸಮಸ್ಯೆಗಳಿಂದ ಇಬ್ಬರು ಕಾರ್ಡಿನಲ್ಲುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು.
ಇಂದು ಪ್ರತ್ಯೇಕವಾಗಿ ಕಾರ್ಡಿನಲ್ ಜಿವಾನ್ನಿ ಎಂಜೆಲೋ ಬೆಚ್ಯು ಅವರು ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಮೇ 7 ರಂದು ಬೆಳಿಗ್ಗೆ 10 ಗಂಟೆಗೆ ಕಾನ್ಕ್ಲೇವ್'ಗೂ ಮುಂಚಿತವಾಗಿ ಬಲಿಪೂಜೆಯನ್ನು ಅರ್ಪಿಸಲಾಗುತ್ತದೆ. ಕಾರ್ಡಿನಲ್ಲುಗಳ ಪರಿಷತ್ತಿನ ಡೀನ್ ಆಗಿರುವ ಕಾರ್ಡಿನಲ್ ಜಿವಾನಿ ಬತ್ತಿಸ್ತ ರೇ ಅವರು ಈ ಬಲಿಪೂಜೆಯ ಪ್ರಧಾನ ಯಾಜಕರಾಗಿರಲಿದ್ದಾರೆ. ತದನಂತರ ಸಂಜೆ 4:30 ಕ್ಕೆ ಮತದಾರ ಕಾರ್ಡಿನಲ್ಲುಗಳು ಸಿಸ್ಟೈನ್ ಚಾಪೆಲ್ ಒಳಗೆ ಹೋಗುತ್ತಾರೆ. ಆ ಮೂಲಕ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ.