ಮಾತೆ ಮರಿಯಳೆಡೆಗಿನ ಪೋಪ್ ಫ್ರಾನ್ಸಿಸ್ ಅವರ ಪ್ರೀತಿಯನ್ನು ನೆನೆದ ಬಿಷಪ್ ಮರೀನಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರ ಪೂಜಾವಿಧಿ ಆಚರಣೆಗಳ ಉಸ್ತುವಾರಿಯಾಗಿ 8 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಬಿಷಪ್ ಗೀಡೋ ಮರೀನಿ ಅವರು ಮಾತೆ ಮರಿಯಮ್ಮನವರೆಡೆಗೆ ಪೋಪ್ ಫ್ರಾನ್ಸಿಸ್ ಅವರ ಪ್ರೀತಿಯ ಕುರಿತು ನೆನಪಿಸಿಕೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥ ಬಲಿಪೂಜೆಯನ್ನು ಅರ್ಪಿಸುತ್ತಾ ಮಾತನಾಡಿದ ಅವರು ಧರ್ಮಸಭೆಗೆ, ಮಾನವೀಯತೆಗೆ ಹಾಗೂ ಇಡೀ ವಿಶ್ವಕ್ಕೆ ಪೋಪ್ ಫ್ರಾನ್ಸಿಸ್ ಅವರ ಕೊಡುಗೆಯ ಕುರಿತು ಮಾತನಾಡಿದರು.
ಇಟಲಿಯ ಟೊರ್ಟೋನಾದ ಧರ್ಮಾಧ್ಯಕ್ಷರಾಗಿರುವ ಬಿಷಪ್ ಗೀಡೋ ಮರಿನಿ ಅವರು ಪೋಪ್ ಫ್ರಾನ್ಸಿಸ್ ಅವರೊಂದಿಗೆ ತಮ್ಮ ಕಾರ್ಯವೈಖರಿಯನ್ನು ಹಾಗೂ ಒಡನಾಟವನ್ನು ನೆನಪಿಸಿಕೊಂಡು, ಅವರ ಸ್ಮರಣಾರ್ಥ ಬಲಿಪೂಜೆಯಲ್ಲಿ ಮಾತನಾಡಿದ್ದಾರೆ.
"ಪೋಪ್ ಫ್ರಾನ್ಸಿಸ್ ಅವರು ಪ್ರತಿ ಸಲ ಪ್ರೇಷಿತ ಭೇಟಿಗಾಗಿ ವಿದೇಶಕ್ಕೆ ಹೋಗುವ ಮುನ್ನ ಮಾತೆ ಮರಿಯಮ್ಮನವರ ಮಹಾದೇವಾಲಯವಾದ ಸಂತ ಮೇರಿ ಮೇಜರ್ ದೇವಾಲಯಕ್ಕೆ ಬಂದು ಸಾಲುಸ್ ಪಾಪುಲಿ ರೋಮಾನಿ ಎಂಬ ಮಾತೆಯ ಚಿತ್ರದ ಮುಂದೆ ಬಂದು ಪ್ರಾರ್ಥಿಸುತ್ತಿದ್ದರು. ಅದೇ ರೀತಿ, ಪ್ರೇಷಿತ ಭೇಟಿಯನ್ನು ಮುಗಿಸಿ, ಸುರಕ್ಷಿತವಾಗಿ ಹಿಂತಿರುಗಿದ ನಂತರ ಅವರು ಮತ್ತೆ ಇಲ್ಲಿಗೆ ಬಂದು ಧನ್ಯವಾದಗಳನ್ನು ಸಲ್ಲಿಸುತ್ತಿದ್ದರು. ಇದು ಅವರಿಗೆ ಮಾತೆ ಮರಿಯಮ್ಮನವರ ಮೇಲೆ ಇದ್ದ ಅತೀವ ನಂಬಿಕೆ, ಪ್ರೀತಿ ಹಾಗೂ ನಂಬಿಕೆಯನ್ನು ಸೂಚಿಸುತ್ತದೆ" ಎಂದು ಬಿಷಪ್ ಗೀಡೋ ಮರೀನಿ ತಮ್ಮ ಪ್ರಬೋಧನೆಯಲ್ಲಿ ಹೇಳಿದರು.
ಇದೇ ವೇಳೆ ಅವರು ಪೋಪ್ ಫ್ರಾನ್ಸಿಸ್ ಅವರು ಹೇಗೆ ವಿವಿಧ ಸನ್ನಿವೇಷಗಳಲ್ಲಿ ಮಾತೆ ಮರಿಯಮ್ಮನವರ ಕುರಿತ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದರು ಎಂಬ ಕುರಿತು ಅವರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನು ನೆನಪಿಸಿಕೊಂಡರು.
ಪೋಪ್ ಫ್ರಾನ್ಸಿಸ್ ಅವರು ಅವರ ಪೋಪಾಧಿಕಾರುದ್ದಕ್ಕೂ ಕರುಣೆ ಹಾಗೂ ದೇವರ ದಯೆಯ ಕುರಿತು ಒತ್ತಿ ಹೇಳುತ್ತಿದ್ದರು ಎಂದು ಹೇಳಿದ ಬಿಷಪ್ ಮರೀನಿ ಅವರು ಶುಭ ಸಂದೇಶದ ಜೀವನವನ್ನು ಜೀವಿಸುವುದೇ ನಿಜವಾದ ಸಂತೋಷ ಎಂದು ಪೋಪ್ ಫ್ರಾನ್ಸಿಸ್ ಅವರು ನಂಬಿದ್ದರು. ಹಾಗಾಗಿ ನಾವೆಲ್ಲರೂ ಅದೇ ಸಂತೋಷದಿಂದ ಶುಭ ಸಂದೇಶದ ಜೀವನವನ್ನು ಜೀವಿಸಬೇಕು ಎಂದು ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಸರಳತೆ ಹಾಗೂ ದೀನತೆಯಿಂದ ಇಡೀ ವಿಶ್ವದ ಧರ್ಮಕೇಂದ್ರ ಗುರುವಾಗಿದ್ದರು ಎಂದು ಬಿಷಪ್ ಗೀಡೋ ಮರೀನಿ ಅವರು ಹೇಳಿದರು.