ಮಧ್ಯಪ್ರಾಚ್ಯವನ್ನು ಕಾಡುತ್ತಿರುವ ಅಸ್ಥಿರತೆ, ಹಸಿವು ಮತ್ತು ಹಿಂಸಾಚಾರ
ನಾಥನ್ ಮೊರ್ಲೆ
ಮಧ್ಯಪ್ರಾಚ್ಯವು ವ್ಯಾಪಕ ಅಸ್ಥಿರತೆ ಮತ್ತು ಹಿಂಸಾಚಾರವನ್ನು ಎದುರಿಸುತ್ತಲೇ ಇದೆ, ಬಡತನವು ಹಲವಾರು ಪ್ರದೇಶಗಳಲ್ಲಿನ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಅಪೌಷ್ಟಿಕತೆಯಿಂದ ಉಲ್ಬಣಗೊಂಡ ಮಾನವೀಯ ಬಿಕ್ಕಟ್ಟಿಗೆ ಯೆಮೆನ್ ಒಂದು ಸ್ಪಷ್ಟ ಉದಾಹರಣೆಯಾಗಿ ಉಳಿದಿದೆ. ದೇಶದೊಳಗಿನ ಹಸಿವು "ಬಿಕ್ಕಟ್ಟಿನೊಳಗಿನ ಬಿಕ್ಕಟ್ಟನ್ನು" ಪ್ರತಿನಿಧಿಸುತ್ತದೆ ಎಂದು ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (ಗಡಿಗಳಿಲ್ಲದ ವೈದ್ಯರು) ಎತ್ತಿ ತೋರಿಸಿದ್ದು, ಜನಸಂಖ್ಯೆಯ ದುರ್ಬಲತೆಯನ್ನು ಹೆಚ್ಚಿಸಿದೆ.
2024ನೇ ವರ್ಷವು ವಿಶೇಷವಾಗಿ ಭೀಕರವಾಗಿತ್ತು, ಯೆಮೆನ್‌ನಾದ್ಯಂತ ತೀವ್ರವಾದ ನೀರಿನಂಶದ ಅತಿಸಾರ ಹರಡುವಿಕೆಯಿಂದ ಗುರುತಿಸಲ್ಪಟ್ಟಿತು, ಜೊತೆಗೆ MSF ಸೌಲಭ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಅಪೌಷ್ಟಿಕತೆ ವರದಿಯಾಗಿದೆ.
ಈಗಾಗಲೇ ಭೀಕರವಾಗಿದ್ದ ಪರಿಸ್ಥಿತಿಗೆ ಪೋಲಿಯೊ ಮತ್ತು ಡಿಫ್ತೀರಿಯಾ ಪ್ರಕರಣಗಳು ಮತ್ತೆ ಮತ್ತೆ ಸೇರ್ಪಡೆಯಾದವು. ಈ ವಾರಾಂತ್ಯದ ಆರಂಭದಲ್ಲಿ, ಅಮೇರಿಕ ಸೇನೆಯು ಉತ್ತರ ಯೆಮನ್‌ನಲ್ಲಿರುವ ಹೌತಿ ನೆಲೆಗಳನ್ನು ಗುರಿಯಾಗಿಸಿಕೊಂಡು 29 ವೈಮಾನಿಕ ದಾಳಿಗಳನ್ನು ನಡೆಸಿತು. ಇದರ ನಡುವೆ, ಗಾಜಾದಲ್ಲಿ ಉದ್ವಿಗ್ನತೆ ಇನ್ನೂ ಹೆಚ್ಚಾಗಿದೆ.
ಶನಿವಾರ ಸಂಜೆ, ಇಸ್ರಯೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರು, ಯುದ್ಧವನ್ನು ಕೊನೆಗೊಳಿಸಲು ಮತ್ತು ಇಸ್ರಯೇಲ್ ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ಅದಕ್ಕೆ ಪ್ರತಿಯಾಗಿ ಅರ್ಧದಷ್ಟು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಸ್ತಾಪವನ್ನು ಹಮಾಸ್ ತಿರಸ್ಕರಿಸಿದೆ ಎಂದು ಬಹಿರಂಗಪಡಿಸಿದರು. ಸಂಘರ್ಷವನ್ನು ಪುನರಾರಂಭಿಸುವ ಮೊದಲು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಇಸ್ರಯೇಲ್ ಹಮಾಸ್ ನ್ನು ಮೋಸಗೊಳಿಸಬಹುದು ಎಂಬ ಕಲ್ಪನೆಯನ್ನು ನೆತನ್ಯಾಹುರವರು ತಳ್ಳಿಹಾಕಿದರು. ಅಂತರರಾಷ್ಟ್ರೀಯ ಸಮುದಾಯವು ಅಂತಹ ಕ್ರಮವನ್ನು ಸಹಿಸುವುದಿಲ್ಲ ಎಂದು ಒತ್ತಿ ಹೇಳಿದರು.
ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಗಳು ಮುಂದುವರೆದಿದ್ದು, ವಾರಾಂತ್ಯದಲ್ಲಿ ರಫಾ ಪ್ರದೇಶದಲ್ಲಿ ನಡೆದ ಶಸ್ತ್ರಸಜ್ಜಿತ ದಾಳಿಯಲ್ಲಿ 40ಕ್ಕೂ ಹೆಚ್ಚು ಹಮಾಸ್ ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ಇಸ್ರಯೇಲ್ ನ ರಕ್ಷಣಾ ಪಡೆಗಳು ವರದಿ ಮಾಡಿವೆ. ನೆರೆಯ ಲೆಬನಾನ್‌ನಲ್ಲಿ, ಫ್ರಾನ್ಸ್ ಮತ್ತು ಅಮೇರಿಕದ ಮಧ್ಯಸ್ಥಿಕೆಯಲ್ಲಿ ನವೆಂಬರ್ 27, 2024 ರಿಂದ ಜಾರಿಗೆ ಬಂದಿರುವ ಕದನ ವಿರಾಮದ ಹೊರತಾಗಿಯೂ, ಮಧ್ಯಂತರ ಹಿಂಸಾಚಾರ ಮುಂದುವರೆದಿದೆ.
ಶನಿವಾರ, ಸಿಡಾನ್‌ನಲ್ಲಿ ಇಸ್ರಯೇಲ್ ನ ಡ್ರೋನ್ ದಾಳಿಯು ಹೆಜ್ಬೊಲ್ಲಾದ ಸದಸ್ಯನ ಪ್ರಾಣವನ್ನು ಬಲಿ ತೆಗೆದುಕೊಂಡಿತು ಎಂದು ಲೆಬನಾನಿನ ಆರೋಗ್ಯ ಅಧಿಕಾರಿಗಳು ಮತ್ತು ಭದ್ರತಾ ಮೂಲಗಳು ತಿಳಿಸಿವೆ. ಇಸ್ರಯೇಲ್ ನ ಪಡೆಗಳು ಈ ಕಾರ್ಯಾಚರಣೆಗಳನ್ನು ಹೆಜ್ಬೊಲ್ಲಾದ "ಬೆದರಿಕೆ"ಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಸಮರ್ಥಿಸಿಕೊಂಡರೂ, ಸಾವುನೋವುಗಳು ವರದಿಯಾಗಿವೆ, ಇದು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ.
ಸಿರಿಯಾದಲ್ಲಿ, ವರ್ಷಗಳ ಸಂಘರ್ಷದ ನಂತರ ಪುನರ್ನಿರ್ಮಾಣ ಪ್ರಯತ್ನಗಳು ಮುಂದುವರೆದಿವೆ. ಕಳೆದ ವರ್ಷ ಡಿಸೆಂಬರ್ 9ರ ಹೊತ್ತಿಗೆ, 175,512 ಸಿರಿಯದವರು ಟರ್ಕಿಯೆಯಿಂದ ಸ್ವಯಂಪ್ರೇರಣೆಯಿಂದ ಮನೆಗೆ ಮರಳಿದ್ದಾರೆ, 2017 ರಿಂದ ಹಿಂದಿರುಗಿದ ಒಟ್ಟು ಸಂಖ್ಯೆ 915,515ಕ್ಕೆ ತಲುಪಿದೆ.
"ಸ್ವಯಂಪ್ರೇರಿತ, ಸುರಕ್ಷಿತ, ಘನತೆ ಮತ್ತು ಕ್ರಮಬದ್ಧ" ಎಂದು ವಿವರಿಸಲಾದ ಈ ಚಳುವಳಿಗಳು 33,000ಕ್ಕೂ ಹೆಚ್ಚು ಕುಟುಂಬಗಳನ್ನು ಒಳಗೊಂಡಿವೆ. 2011ರಲ್ಲಿ ಪ್ರಾರಂಭವಾದ ಸಿರಿಯಾದ ಅಂತರ್ಯುದ್ಧವು ಲಕ್ಷಾಂತರ ಜನರನ್ನು ಪಲಾಯನ ಮಾಡುವಂತೆ ಮಾಡಿತು, ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಬಿಕ್ಕಟ್ಟಿನ ಉತ್ತುಂಗದಲ್ಲಿ ಟರ್ಕಿಯೆ 3.6 ಮಿಲಿಯನ್‌ಗಿಂತಲೂ ಹೆಚ್ಚು ಸಿರಿಯದವರಿಗೆ ಆಶ್ರಯ ತಾಣವಾಯಿತು.