ಸಾರ್ವಜನಿಕ ಭೇಟಿಯಲ್ಲಿ ಪೋಪ್: ಸಂತ ಜೋಸೆಫರ ಪವಿತ್ರ ಮತ್ತು ವಿಶ್ವಾಸದ ಮಾದರಿಯನ್ನು ನಾವು ಅನುಸರಿಸಬೇಕು
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಸಾರ್ವಜನಿಕವಾಗಿ ಭಕ್ತಾಧಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಸಂತ ಜೋಸೆಫರ ಕುರಿತು ಮಾತನಾಡಿದ್ದು, ಸಂತ ಜೋಸೆಫರ ಪವಿತ್ರ ಹಾಗೂ ವಿಶ್ವಾಸದ ಮಾದರಿಯನ್ನು ನಾವೆಲ್ಲರೂ ಪ್ರೀತಿಯಿಂದ ಅನುಕರಿಸಬೇಕೆಂದು ಹೇಳಿದ್ದಾರೆ.
ದೇವರ ಯೋಜನೆಗಳನ್ನು ನಮ್ಮ ಬದುಕಿಗೆ ಹೇಗೆ ಆಹ್ವಾನಿಸಬೇಕು ಎಂಬ ಕುರಿತು ಸಂತ ಜೋಸೆಫರು ನಮಗೆ ಹಾದಿಯನ್ನು ತೋರುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಜ್ಯೂಬಿಲಿ ವರ್ಷದಲ್ಲಿ 'ಯೇಸುಕ್ರಿಸ್ತರೇ ನಮ್ಮ ಭರವಸೆ" ಎಂಬ ಕುರಿತು ಧರ್ಮೋಪದೇಶವನ್ನು ಮುಂದುವರೆಸಿದ ಪೋಪ್ ಫ್ರಾನ್ಸಿಸ್ ಅವರು ಈ ವಾರ ಸಂತ ಜೋಸೆಫರ ಮಾದರಿಯ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದರು.
ದೇವರ ಚಿತ್ತದ ಕುರಿತು ತನ್ನದೇ ಆದ ಸಣ್ಣಪುಟ್ಟ ಅಪನಂಬಿಕೆಗಳಿದ್ದರೂ ಸಹ ಹೇಗೆ ಸಂತ ಜೋಸೆಫರ ದೇವರ ಚಿತ್ತವನ್ನು ನೆರವೇರಿಸಲು ಮಾತೆ ಮರಿಯಮ್ಮನವರನ್ನು ತನ್ನ ಪತ್ನಿಯನ್ನಾಗಿ ಸ್ವೀಕರಿಸಲು ಒಪ್ಪುತ್ತಾರೆ ಹಾಗೂ ಆ ಮೂಲಕ ಪವಿತ್ರ ಕುಟುಂಬದ ಪೋಷಕರಾಗುತ್ತಾರೆ ಎಂಬ ಕುರಿತು ಪೋಪ್ ಫ್ರಾನ್ಸಿಸ್ ಅವರು ಇಂದು ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಸಂತ ಜೋಸೆಫರು ಮಾತನಾಡುವುದಿಲ್ಲ. ಬದಲಿಗೆ ಅವರು ನಂಬುತ್ತಾರೆ. ವಿಶ್ವಾಸವನ್ನಿಡುತ್ತಾರೆ. ಎಲ್ಲರಂತೆ ಅವರದು ಮಾತಲ್ಲ ಬದಲಿಗೆ ಕೃತಿ. ಅವರು ವಿಶ್ವಾಸದಿಂದ ನಡೆದುಕೊಳ್ಳುವವರಾಗಿದ್ದಾರೆ" ಎಂದು ಹೇಳಿದರು.
ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು ಎಲ್ಲರಿಗೂ ಸಂತ ಜೋಸೆಫರ ಮಾದರಿಯನ್ನು ಅನುಸರಿಸುವಂತೆ ಕರೆ ನೀಡಿದರು.