ಸಾರ್ವಜನಿಕ ದರ್ಶನದಲ್ಲಿ ಪೋಪ್: ಯೇಸುವಿನ ಜನನಕ್ಕೆ ದೀನರು, ನಿರ್ಗತಿಕರು ಸಾಕ್ಷಿಗಳಾಗಿದ್ದಾರೆ
ವರದಿ: ಕ್ರಿಸ್ಟೋಫರ್ ವೆಲ್ಸ್
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದ ಸಂತ ಪೇತ್ರರ ಚೌಕದಲ್ಲಿ ಸಾರ್ವಜನಿಕ ಭೇಟಿಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದು, "ಯೇಸು ಕ್ರಿಸ್ತರೇ ನಮ್ಮ ಭರವಸೆ" ಎಂಬುದರ ಮೇಲೆ ಧರ್ಮೋಪದೇಶವನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಯೇಸುವಿನ ಜನನಕ್ಕೆ ದೀನರು, ನಿರ್ಗತಿಕರು ಸಾಕ್ಷಿಗಳಾಗಿದ್ದಾರೆ ಎಂದು ಹೇಳಿದ್ದಾರೆ.
"ತಮ್ಮ ಜನನಕ್ಕೂ ಮುಂಚಿತವಾಗಿಯೇ ಪ್ರಭು ಕ್ರಿಸ್ತರು ಮಾತೆ ಮರಿಯಮ್ಮನವರ ಉದರದಲ್ಲಿ ನಮ್ಮ ಜೊತೆ ಪಯಣಿಸಿದರು. ಮಾತೆ ಮರಿಯ ಎಲಿಜಬೇತಳನ್ನು ಸಂಧಿಸಿದಾಗ, ಸಂತ ಜೋಸೆಫರ ಜೊತೆಗೆ ಹಾಗೂ ನಮ್ಮೆಲ್ಲರ ಜೊತೆಗೆ ಅವರು ಸಂಚರಿಸಿದರು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಏಸುಕ್ರಿಸ್ತರು ಸಾಧಾರಣ ಅರಸರಂತೆ ಜನ್ಮ ತಾಳಲಿಲ್ಲ ಬದಲಿಗೆ ಒಂದು ಮನೆಯ ಹಿಂದೆ ಪ್ರಾಣಿಗಳು ಜೀವಿಸುವ ಕೊಟ್ಟಿಗೆಯಲ್ಲಿ ಅವರು ನಮಗಾಗಿ ಸಾಮಾನ್ಯ ಮನುಷ್ಯನಂತೆ ಹುಟ್ಟಿದರು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಸಾರ್ವಜನಿಕ ದರ್ಶನದ ವೇಳೆ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಭು ಯೇಸುಕ್ರಿಸ್ತರ ಜನನದ ಕುರಿತು ಮೊದಲಿಗೆ ತಿಳಿದಿದ್ದು ಆ ಪ್ರದೇಶದಲ್ಲಿ ಕುರಿಯನ್ನು ಕಾಯುತ್ತಿದ್ದ ಕುರುಬರಿಗೆ ಈ ಕುರುಬರು ಅಥವಾ ಕುರಿಗಾಹಿಗಳು ಸುಸಂಸ್ಕೃತ ಜನರಲ್ಲ ಅಥವಾ ವಿದ್ಯಾವಂತರಲ್ಲ ಬದಲಿಗೆ ಅನಕ್ಷರಸ್ಥರಾಗಿ ಕುರಿಗಳನ್ನು ಕಾಯ್ದುಕೊಂಡಿದ್ದವರು. ಆದರೂ ಸಹ ದೇವರು ತಮ್ಮ ಕುಮಾರನಾದ ಏಸುಕ್ರಿಸ್ತರ ಜನನದ ಕುರಿತು ಮೊಟ್ಟಮೊದಲ ಬಾರಿಗೆ ತಿಳಿಸಿದ್ದು ಈ ಕುರುಬರಿಗೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಅಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಬದುಕಿನ ಎಲ್ಲಾ ಸಮಯದಲ್ಲಿಯೂ ಸಹ ದೇವರ ಅನುಗ್ರಹವನ್ನು ಹಾಗೂ ಕೃಪೆಯನ್ನು ಬೇಡುವಂತೆ ತಿಳಿ ಹೇಳಿದರು. ಪ್ರಭು ಯೇಸುಕ್ರಿಸ್ತರನ್ನು ಜಗದ ಕಟ್ಟ ಕಡೆಗೆ ಸಾರಲು ನಾವೆಲ್ಲರೂ ಒಂದೇ ಮನಸುಳ್ಳವರಾಗಿ ಅವರ ಆಜ್ಞೆಗಳನ್ನು ಪಾಲಿಸುವಂಥವರಾಗಿ ಮುನ್ನಡೆಯಬೇಕು. ಈ ನಮ್ಮ ಪ್ರಯಾಣದಲ್ಲಿ ಮಾತೆ ಮರಿಯಮ್ಮನವರು ನಮ್ಮ ಜೊತೆಗಿದ್ದು ನಮ್ಮನ್ನು ಮುನ್ನಡೆಸಲಿ ಎಂದು ಅಂತಿಮವಾಗಿ ವಿಶ್ವಗುರು ಫ್ರಾನ್ಸಿಸ್ ಅವರು ಭಕ್ತಾದಿಗಳಿಗೆ ಹೇಳಿದರು.