ಸಾರ್ವಜನಿಕ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್: ಮಕ್ಕಳನ್ನು ನಾವು ಸದಾ ರಕ್ಷಿಸಬೇಕು
ವರದಿ: ಡೆಬೋರಾ ಕ್ಯಾಸ್ಟಲೀನೊ ಲುಬೋವ್
ಪೋಪ್ ಫ್ರಾನ್ಸಿಸ್ ಅವರು ಇಂದಿನ ಸಾರ್ವಜನಿಕ ಭೇಟಿಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಕ್ಕಳ ಕುರಿತು ಧರ್ಮೋಪದೇಶವನ್ನು ಮುಂದುವರೆಸಿರುವ ಅವರು ನಾವು ಸದಾ ಮಕ್ಕಳನ್ನು ರಕ್ಷಿಸಬೇಕು. ಸದಾ ಅವರ ಕಾಳಜಿಯನ್ನು ವಹಿಸಬೇಕು ಎಂದು ಹೇಳಿದ್ದಾರೆ.
ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಾರ್ವಜನಿಕ ಭೇಟಿಯನ್ನು ಆಯೊಜಿಸಿದ್ದರು. ಇಲ್ಲಿಯೇ ಅವರು ನೂರಾರು ಭಕ್ತಾಧಿಗಳನ್ನು ಭೇಟಿ ಮಾಡಿ ಮಾತನಾಡಿದರು.
"ಇಂದು ಪ್ರಪಂಚದಲ್ಲಿ ಪ್ರೌಡಾವಸ್ಥೆಗೆ ಬರುವ ಮುನ್ನವೇ ಲಕ್ಷಾಂತರ ಮಕ್ಕಳು ಬಡತನ ಸೇರಿದಂತೆ ವಿವಿಧ ಪ್ರಾಪಂಚಿಕ ಕಷ್ಟ ಕಾರ್ಪಣ್ಯಗಳಿಗೆ ಒಳಗಾಗಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಲಕ್ಷಾಂತರ ಮಕ್ಕಳನ್ನು ಶೋಷಣೆಗೆ ಒಳಪಡಿಸಲಾಗಿದೆ. ಒಂದೇ ಒಂದು ಮಗು ಶೋಷಣೆಗೆ ಒಳಗಾದರೂ ಸಹ ಅದು ಮಕ್ಕಳ ಮೇಲಿನ ಶೋಷಣೆ ಹಾಗೂ ದೌರ್ಜನ್ಯವೇ ಆಗಿದೆ. ಆದುದರಿಂದ ನಾವು ಮಕ್ಕಳನ್ನು ರಕ್ಷಿಸಿ, ಕಾಪಾಡಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ "ಮಕ್ಕಳು ನೀಲಿ ಚಿತ್ರಗಳೂ ಸೇರಿದಂತೆ ಕೆಟ್ಟ ಚಟಗಳಿಗೆ ದಾಸರಾಗುವುದನ್ನು ತಡೆಯಬೇಕು" ಎಂದು ಅವರು ಹೇಳಿದರು.
"ಹಾಗಾಗಿ ನಾವು ಮಕ್ಕಳಲ್ಲಿ ಅರಿವನ್ನು ಹಾಗೂ ಪ್ರಜ್ಞೆಯನ್ನು ಮೂಡಿಸಬೇಕು. ಈಗಾಗಲೇ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳೊಂದಿಗೆ ಐಕ್ಯಮತ್ಯವನ್ನು ಹಾಗೂ ನಮ್ಮ ನಿಕಟತೆಯನ್ನು ನಾವು ವ್ಯಕ್ತಪಡಿಸಬೇಕು. ಅವರ ಗಾಯಗಳಿಗೆ ನಾವು ಸಾಂತ್ವನದ ಔಷದಿಯನ್ನು ಹಚ್ಚಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
"ಸಂತ ತೆರೇಸಮ್ಮನವರನ್ನು ನಾವು ಮಾದರಿಯನ್ನಾಗಿ ತೆಗೆದುಕೊಳ್ಳುವ ಮೂಲಕ ಮಕ್ಕಳ ಕುರಿತು ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.