ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ದೀಕ್ಷಾಸ್ನಾನದ ಮೂಲಕ ನಾವು ಹೊಸ ಜೀವನ ಪಡೆಯುತ್ತೇವೆ
ವರದಿ: ಲಿಂಡಾ ಬೊರ್ಡೋನಿ
ಇಂದು ಪ್ರಭುವಿನ ದೀಕ್ಷಾಸ್ನಾನದ ಮಹೋತ್ಸವದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಎಂದಿನಂತೆ ವ್ಯಾಟಿಕನ್ ನಗರದಲ್ಲಿ ಇಂದು ಮಧ್ಯಾಹ್ನ ತ್ರಿಕಾಲ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಈ ವೇಳೆ ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಅವರು "ದೀಕ್ಷಾಸ್ನಾನ ಎಂಬುದು ನಮ್ಮನ್ನು ಹೊಸ ಜೀವನಕ್ಕೆ ಕರೆದೊಯ್ಯುವ ಮಾರ್ಗವಾಗಿದೆ. ನಮ್ಮ ಪಾಪವನ್ನು ತೊಳೆದು, ನಮ್ಮನ್ನು ನವೀಕರಿಸಿ, ನೂತನ ಜೀವನಕ್ಕೆ ನಮ್ಮನ್ನು ಇದು ಆಣಿಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಇಂದಿನ ಲೂಕನ ಶುಭಸಂದೇಶದ ವಾಕ್ಯಗಳ ಕುರಿತು ಧ್ಯಾನಿಸಿದರು. ಸ್ನಾನಿಕ ಯೊವ್ವಾನರು ಅಲ್ಲಿನ ಜನಗಳಿಗೆ ಪ್ರಾಯಶ್ಚಿತ್ತವನ್ನು ಹೊಂದಿ, ಬದಲಾಗಿ ಸ್ನಾನದೀಕ್ಷೆ ಪಡೆಯಿರಿ ಎಂದು ಬೋಧಿಸುವಾಗ ಅಲ್ಲಿನ ಜನತೆ ತಮ್ಮ ಬರಿಗಾಲುಗಳಿಂದ ಹಾಗೂ ಬರೀ ಆತ್ಮಗಳಿಂದ ಬರುತ್ತಿದ್ದರು ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು "ಈ ಸನ್ನಿವೇಷ ನನ್ನ ಹೃದಯಕ್ಕೆ ಹತ್ತಿರವಾದ ಸನ್ನಿವೇಷ ಏಕೆಂದರೆ ನಾವೂ ಸಹ ಈ ಜನಗಳಂತೆ ನಮ್ಮದೇ ಬರಿದಾದ ಬದುಕನ್ನು ಕ್ರಿಸ್ತರಿಗೆ ನೀಡಬೇಕು ಎಂದು ಹೇಳಿದ್ದಾರೆ.
ಯೇಸುಕ್ರಿಸ್ತರು ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದಂತೆ ಆಕಾಶದಲ್ಲಿ ದಿವ್ಯವಾಣಿಯ ಮೂಲಕ ದೇವರು ಮಾತನಾಡಿದ ಕುರಿತು ಚಿಂತನೆಯನ್ನು ನಡೆಸಿದ ಪೋಪ್ ಫ್ರಾನ್ಸಿಸ್ ಅವರು "ದೇವರು ಯೇಸುಕ್ರಿಸ್ತರನ್ನು ತಮ್ಮ ಪ್ರೀತಿಯ ಪುತ್ರ ಎಂದು ಹೇಳುವ ಮೂಲಕ ನಾವು ಕ್ರಿಸ್ತರ ಮೂಲಕ ಅವರನ್ನು ತಂದೆ ಹಾಗೂ ದೇವರೆಂದು ಕಂಡುಕೊಳ್ಳಲು ಅವಕಾಶವನ್ನು ನೀಡಿದ್ದಾರೆ. ನಾವು ನಮ್ಮ ತಂದೆಯ ಬಳಿಗೆ ಹೋಗಲು ಕ್ರಿಸ್ತರೇ ನಮಗಿರುವ ಏಕೈಕ ಮಾರ್ಗ" ಎಂದು ಅವರು ಹೇಳಿದರು.
ದೀಕ್ಷಾಸ್ನಾನದ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ದೀಕ್ಷಾಸ್ನಾನ ಪಡೆಯುವುದರ ಮೂಲಕ ನಾವು ಕೇವಲ ಧರ್ಮಸಭೆಯ ಸದಸ್ಯರಾಗುವುದಿಲ್ಲ. ಬದಲಿಗೆ ನೂತನ ಜೀವಿಗಳಾಗುತ್ತೇವೆ. ದೇವರು ನಮ್ಮಲ್ಲಿ ನೆಲೆಸುತ್ತಾರೆ. ಪವಿತ್ರಾತ್ಮರ ಸ್ಪೂರ್ತಿ ಹಾಗೂ ವರದಾನಗಳು ನಮ್ಮಲ್ಲಿ ನೆಲೆಸುತ್ತವೆ. ಆದುದರಿಂದ ನಾವು ನಮ್ಮ ದೀಕ್ಷಾಸ್ನಾನದ ದಿನಾಂಕವನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಅಂತಿಮವಾಗಿ ಅವರು "ನಾವು ಪ್ರಭುವಿನ ಮಾರ್ಗದಲ್ಲಿ ದೀಕ್ಷಾಸ್ನಾನವನ್ನು ಪಡೆದು ಮುನ್ನುಗ್ಗಲು, ಮಾತೆ ಮರಿಯಮ್ಮನವರು ಸದಾ ನಮಗಾಗಿ ಪ್ರಾರ್ಥಿಸಿ, ನಮ್ಮ ಪಯಣದ ಜೊತೆ ಇರಲಿ" ಎಂದು ಹೇಳಿದರು.