ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಯೇಸು ಕ್ರಿಸ್ತರೇ ನಮ್ಮ ರಕ್ಷಣೆ ಮತ್ತು ಬೆಳಕಾಗಿದ್ದಾರೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಪ್ರಭುವಿನ ಸಮರ್ಪಣೆಯ ಕುರಿತು ಮಾತನಾಡಿದ್ದಾರೆ. ಯೇಸುಕ್ರಿಸ್ತರು ಎಲ್ಲಾ ಜನರ ರಕ್ಷಣೆಯೂ ಹಾಗೂ ಬೆಳಕಾಗಿದ್ದಾರೆ ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು ನಾವೂ ದೇವರನ್ನು ಅರಿತುಕೊಂಡು, ವಿಶ್ವಾಸದಲ್ಲಿ ಬಾಳಬೇಕು ಎಂದು ಕರೆ ನೀಡಿದ್ದಾರೆ.
ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಇಂದಿನ ದೇವಾಲಯದಲ್ಲಿ ಪ್ರಭು ಯೇಸುವನ್ನು ಕಾಣಿಕೆಯಾಗಿ ಸಮಸರ್ಪಿಸಿದ ಹಬ್ಬದ ಪ್ರಾಮುಖ್ಯತೆಯ ಕುರಿತು ಮಾತನಾಡಿದರು.
ಯೇಸುಬಾಲರನ್ನು ದೇವಾಲಯದಲ್ಲಿ ಕಾಣಿಕೆಯನ್ನಾಗಿ ಅರ್ಪಿಸುವಾಗ ಅಲ್ಲಿ ಸುಮಾರು ದಶಕಗಳಿಂದ ಕಾಯುತ್ತಿದ್ದ ಸಿಮೆಯೋನ ಹಾಗೂ ಪ್ರವಾದಿನಿ ಅನ್ನಳು ದೇವರ ಮಹಿಮೆಯನ್ನು ಕೊಂಡಾಡುತ್ತಾರೆ. ಸಿಮೆಯೋನನು ಕ್ರಿಸ್ತ ಕಂದನನ್ನು ಕಂಡು ನಾನು ಧನ್ಯನಾದೆ ಎಂದು ಹೇಳುತ್ತಾನೆ - ಇವೆಲ್ಲವುಗಳ ಅರ್ಥ ದೇವರು ನಮ್ಮ ನಡುವೆಯೇ ಇದ್ದಾರೆ ಎಂಬುದಾಗಿದೆ. ಪ್ರಭು ತಮ್ಮ ಜನತೆಯನ್ನು ಎಂದಿಗೂ ಕೈಬಿಡುವುದಿಲ್ಲ. ಅವರು ಸದಾ ನಮ್ಮನ್ನು ಮುನ್ನಡೆಸುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಜನತೆಯನ್ನು ಉದ್ದೇಶಿಸಿ ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಕ್ರಿಸ್ತರೇ ಮನುಕುಲದ ರಕ್ಷೆ ಹಾಗೂ ಬೆಳಕಾಗಿದ್ದಾರೆ. ಈ ಬೆಳಕಿನ ಮಾರ್ಗದಲ್ಲಿಯೇ ನಾವೆಲ್ಲರೂ ನಡೆಯಬೇಕಿದೆ" ಎಂದು ಹೇಳಿದರು. ಅಂತಿಮವಾಗಿ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಕೋರಿದ ಅವರು "ಮಾತೆ ಮರಿಯಮ್ಮನವರು ನಮ್ಮ ಬದುಕಿನಲ್ಲಿ ನಮಗೆ ಸದಾ ಮಾರ್ಗದರ್ಶನವಾಗಿದ್ದು, ನಮ್ಮನ್ನು ಮುನ್ನಡೆಸಲಿ" ಎಂದು ಹೇಳಿದರು.