ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಜ್ಯೂಬಿಲಿ ಕ್ರಿಸ್ತರೊಂದಿಗೆ ನಮ್ಮ ಸಂಬಂಧವನ್ನು ನವೀಕರಿಸವ ಸಮಯವಾಗಿದೆ
ವರದಿ: ಲಿಂಡಾ ಬೋರ್ಡೋನಿ
ಪೋಪ್ ಫ್ರಾನ್ಸಿಸ್ ಅವರು ಇಂದು ಭಾನುವಾರ ವ್ಯಾಟಿಕನ್ ನಗರದ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳಿಗಾಗಿ ಎಂದಿನಂತೆ ತಮ್ಮ ತ್ರಿಕಾಲ ಪ್ರಾರ್ಥನೆಯನ್ನು ನೆರವೇರಿಸಿದರು. ಈ ವೇಳೆ ಪ್ರಾರ್ಥನೆಯ ನಂತರ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಜ್ಯೂಬಿಲಿ ಎಂಬುದು ಕ್ರೈಸ್ತರು ಕ್ರಿಸ್ತರೆಡೆಗಿನ ತಮ್ಮ ಸಂಬಂಧಗಳನ್ನು ನವೀಕರಿಸಲು ಇರುವ ಸದವಕಾಶವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇಂದಿನ ಸಂತ ಲೂಕರ ಶುಭಸಂದೇಶದಲ್ಲಿ ಕ್ರಿಸ್ತರು ತಮ್ಮ ಸ್ವಂತ ಊರಾದ ನಜರೇತಿನಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಘಟನೆಯ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದರು. ಈ ವೇಳೆ ಪೋಪ್ ಫ್ರಾನ್ಸಿಸ್ ಅವರು ಹೇಗೆ ಯೇಸುಕ್ರಿಸ್ತರು ಯೆಶಾಯನ ಗ್ರಂಥದ ಸುರುಳಿಯನ್ನು ಓದುವಾಗ ತಮ್ಮನ್ನೇ ಸಂಪೂರ್ಣಗೊಳಿಸಿಕೊಂಡರು ಎಂಬ ಕುರಿತು ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಅಲ್ಲಿನ ಜನರು ಹೇಗೆ ಯೇಸುಕ್ರಿಸ್ತರನ್ನು ಈತ ಜೋಸೆಫನ ಮಗನಲ್ಲವೇ? ಹೇಗೆ ಈತ ದೇವರ ವಾಕ್ಯವನ್ನು ತನಗೇ ಅನ್ವಯಿಸಿಕೊಳ್ಳುತ್ತಾನೆ ಇತ್ಯಾದಿಯಾಗಿ ಯೇಸು ಕ್ರಿಸ್ತರ ವಿರುದ‌್ಧ ಅಪಸ್ವರವನ್ನು ಎತ್ತುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ನಾವು ನಿಜವಾಗಿಯೂ ಯೇಸುವನ್ನು ಗುರುತಿಸುತ್ತೇವೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು ಅಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಚಿಂತನೆಗೆ ಹಚ್ಚಿದರು.
ಅಂತಿಮವಾಗಿ ಮಾತೆ ಮರಿಯಮ್ಮನವರ ಕುರಿತು ಮಾತನಾಡಿದ ಅವರು "ಮಾತೆ ಮರಿಯಮ್ಮನವರು ನಮ್ಮ ಸಂತೋಷದ ಬುಗ್ಗೆಯಾಗಿದ್ದು, ನಾವು ಸದಾ ಅವರ ಮಧ್ಯಸ್ಥಿಕೆಯಲ್ಲಿ ಮುನ್ನಡೆಯಬೇಕಿದೆ. ಅವರನ್ನು ಹಿಂಬಾಲಿಸುವ ಮೂಲಕ ನಾವೆಲ್ಲರೂ ಕ್ರಿಸ್ತರ ಹೆಜ್ಜೆಗಳಲ್ಲಿ ನಡೆಯಬೇಕಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.