ತ್ರಿಕಾಲ ಪ್ರಾರ್ಥನೆ: ಬಡವರಿಗೆ ನೆರವಾಗುವ ಆರೋಗ್ಯ ಸೇವೆಗೆ ಪೋಪ್ ಕರೆ
ವರದಿ: ವ್ಯಾಟಿಕನ್ ನ್ಯೂಸ್
ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಆರೋಗ್ಯಕಾರ್ಯಕರ್ತರಿಗೆ ಬೆಂಬಲವನ್ನೂ ಹಾಗೂ ಗೌರವವನ್ನು ನೀಡಬೇಕೆಂದು ಕರೆ ನೀಡಿದ್ದಾರೆ. ಇದೇ ವೇಳೆ ಅವರು ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದೂ ಸಹ ಹೇಳಿದ್ದಾರೆ. ಹೈಟಿ ಹಿಂಸಾಚಾರದ ಕುರಿತು ಪ್ರಸ್ತಾಪಿಸಿರುವ ಪೋಪ್ ಫ್ರಾನ್ಸಿಸ್ ಅವರು ಕಳೆದ ತಿಂಗಳು ಅಲ್ಲಿ ಇಬ್ಬರು ಭಗಿನಿಯರನ್ನು ಕೊಲ್ಲಲಾದ ವಿಷಯವನ್ನೂ ಸಹ ಪ್ರಸ್ತಾಪಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ತ್ರಿಕಾಲ ಪ್ರಾರ್ಥನೆಯ ಚಿಂತನೆಯನ್ನು ವ್ಯಾಟಿಕನ್ ಮಾಧ್ಯಮ ಕಚೇರಿಯು ಬಿಡುಗಡೆ ಮಾಡಿದೆ.
ದೇವರ ಬೆರಳು
ತಮ್ಮ ಆರೋಗ್ಯದ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ತಾವು ಆಸ್ಪತ್ರೆಯಲ್ಲಿದ್ದ ಅವಧಿಯುದ್ದಕ್ಕೂ ಹಾಗೂ ವ್ಯಾಟಿಕನ್ ನಗರಕ್ಕೆ ಮರಳಿದ ಕಳೆದ ಎರಡು ವಾರಗಳಿಂದಲೂ ಅವರನ್ನು "ದೇವರ ಬೆರಳು" ಮುನ್ನಡೆಸುತ್ತಿದೆ ಎಂದು ಹೇಳಿದ್ದಾರೆ. ದೇವರು ಕರುಣಾಮಯಿಯಾಗಿ ತಮ್ಮನ್ನು ಪೊರೆದಿದ್ದಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
"ವ್ಯಾದಿಸ್ತರ ಹಾಗೂ ಆರೋಗ್ಯಸೇವೆ ಕಾರ್ಯಕರ್ತರ ಜ್ಯೂಬಿಲಿ ದಿನವಾದ ಇಂದು ನಾನು ಈವರೆಗೂ ನನ್ನ ರೋಗದಲ್ಲಿ ನನ್ನೊಡನೆ ಇದ್ದ ದೇವರ ಬೆರಳು ಹಾಗೂ ಅವರ ವರದಾನಗಳು ಜಗತ್ತಿನ ಎಲ್ಲಾ ವ್ಯಾದಿಸ್ತರ ಮೇಲೆ ಇಳಿದು, ಅವರಿಗೆ ಸೌಖ್ಯವನ್ನು ನೀಡಲಿ" ಎಂದು ಪೋಪ್ ಫ್ರಾನ್ಸಿಸ್ ಅವರು ನುಡಿದಿದ್ದಾರೆ.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ಮಾಡುತ್ತಿರುವ ವೈದ್ಯರು, ದಾದಿಯರು ಹಾಗೂ ಎಲ್ಲಾ ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿದರು. ಈ ವೇಳೆ ಅವರು ತಮ್ಮ ಸಂದೇಶದಲ್ಲಿ ಆರೋಗ್ಯ ಕಾರ್ಯಕರ್ತರ ಕೆಲಸ ಸುಲಭವಾದುದಲ್ಲ. ಅಲ್ಲಿ ಬಹಳಷ್ಟು ಕಷ್ಟವಿದೆ. ಆದುದರಿಂದ ನಾವು ಅವರನ್ನು ಬೆಂಬಲಿಸಬೇಕು ಹಾಗೂ ಅವರಿಗೆ ಗೌರವವನ್ನು ನೀಡಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಜಗತ್ತಿನಾದ್ಯಂತ ಶಾಂತಿ
ಮುಂದಿವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಎಂದಿನಂತೆ ನೆರೆದಿದ್ದ ಭಕ್ತಾಧಿಗಳಿಗೆ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸಲು ಕರೆ ನೀಡಿದರು. ಪೋಪ್ ಫ್ರಾನ್ಸಿಸ್ ಈ ವೇಳೆ ಉಕ್ರೇನ್ ದೇಶವನ್ನು ನೆನಪಿಸಿಕೊಂಡು, ವಿಶೇಷವಾಗಿ ಅಲ್ಲಿನ ಮಕ್ಕಳಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು.
ಮೊನ್ನೆ ವ್ಯಾಟಿಕನ್ನಿನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾದ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರು ರಷ್ಯಾದ ವಿದೇಶಾಂಗ ಸಚಿವರೊಂದಿಗೆ ಪೋನ್ ಮೂಲಕ ಮಾತನಾಡಿ, ಉಕ್ರೇನ್ ದೇಶದಲ್ಲಿ ಮಾನವೀಯ ನೆರವು ಸೇರಿದಂತೆ, ಶಾಂತಿ ಸ್ಥಾಪನಾ ಅವಕಾಶಗಳ ಕುರಿತು ಚರ್ಚಿಸಿದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಗಾಝಾ, ಮಧ್ಯಪ್ರಾಚ್ಯದ ಸುಡಾನ್, ಕಾಂಗೋ, ಬರ್ಮಾ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿರುವ ವಿವಿಧ ದೇಶಗಳಿಗಾಗಿ ಸಹ ಪ್ರಾರ್ಥಿಸುವಂತೆ ಕರೆ ನೀಡಿದರು. ಹೈಟಿಯಲ್ಲಿ ಕೊಲೆಗೀಡಾದ ಭಗಿನಿಯರಿಗೆ ಪೋಪ್ ಫ್ರಾನ್ಸಿಸ್ ಸಂತಾಪವನ್ನು ಹಾಗೂ ಗೌರವವನ್ನು ಸೂಚಿಸಿದರು.