ತ್ರಿಕಾಲ ಪ್ರಾರ್ಥನೆಯಲ್ಲಿ ವಿಶ್ವ ಶಾಂತಿಗಾಗಿ ಪೋಪ್ ಫ್ರಾನ್ಸಿಸ್ ಕರೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಗೆ ದಾಖಲಾಗಿರುವ ಕಾರಣ ಇಂದು ವೈಯಕ್ತಿಕವಾಗಿ ವ್ಯಾಟಿಕನ್ ನಗರದ ಸಂತ ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆಯನ್ನು ನಡೆಸಲು ಸಾಧ್ಯವಾಗಲಿಲ್ಲ. ಅದಾಗ್ಯೂ, ಪೋಪ್ ಫ್ರಾನ್ಸಿಸ್ ಅವರ ತ್ರಿಕಾಲ ಪ್ರಾರ್ಥನೆಯ ಸಂದೇಶವನ್ನು ವ್ಯಾಟಿಕನ್ ಮಾಧ್ಯಮ ಕಚೇರಿಯು ಪ್ರಕಟಿಸಿದ್ದು, ಇದರಲ್ಲಿ ಪೋಪ್ ಫ್ರಾನ್ಸಿಸ್ ಅವರು ವಿಶ್ವಶಾಂತಿಗಾಗಿ ಕರೆ ನೀಡಿದ್ದಾರೆ.
ವೈಯಕ್ತಿಕವಾಗಿ ಇಂದು ತ್ರಿಕಾಲ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್ ಅವರು ಪ್ರಸ್ತುತ ಯುದ್ಧ-ನಿರತ ದೇಶಗಳಿಗಾಗಿ ಪ್ರಾರ್ಥಿಸಿದರು. ಕೂಡಲೇ ಈ ದೇಶಗಳಲ್ಲಿ ಯುದ್ಧಗಳು ನಿಂತು ಶಾಂತಿ ನೆಲೆಸಲಿ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಮುಂದುವರೆದು ಅವರು ಜೆಮೆಲ್ಲಿ ಆಸ್ಪತ್ರೆಯಲ್ಲಿ ಪಡೆಯುತ್ತಿರುವ ಚಿಕಿತ್ಸೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಪೋಪ್ ಫ್ರಾನ್ಸಿಸ್ ಅವರು ಕಲಾವಿದರ ಜ್ಯೂಬಿಲಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ಆಸ್ಪತ್ರೆಯಲ್ಲಿರುವ ಕಾರಣ ಅವರಿಗೆ ಆಗಲಿಲ್ಲ. ಆದುದರಿಂದ ಈ ಜ್ಯೂಬಿಲಿ ಬಲಿಪೂಜೆಯ ಪ್ರಬೋಧನೆಯ ಅಂಶಗಳನ್ನು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. "ನಾನು ಈ ದಿನ ನಿಮ್ಮೊಂದಿಗಿರಬೇಕಿತ್ತು. ಆದರೆ, ಅನಿವಾರ್ಯವಾಗಿ ನಾನು ಚಿಕಿತ್ಸೆಗೆಂದು ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೇನೆ" ಎಂದು ಪೋಪ್ ಫ್ರಾನ್ಸಿಸ್ ಈ ಸಂದೇಶದಲ್ಲಿ ಹೇಳಿದ್ದಾರೆ.
ಮುಂದುವರೆದು ಪೋಪ್ ಫ್ರಾನ್ಸಿಸ್ ತಮ್ಮ ಸಂದೇಶದಲ್ಲಿ ಯುದ್ಧ ನಿರತ ದೇಶಗಳನ್ನು ನೆನಪಿಸಿಕೊಂಡು, ಅವರಿಗಾಗಿ ಪ್ರಾರ್ಥಿಸಿದರು. ಯುದ್ಧದಿಂದ ನರಳುವುದು ಹಾಗೂ ಹಾನೊಗೊಳಗಾಗುವುದು ಯಾವುದೇ ತಪ್ಪನ್ನು ಮಾಡದ ಸಾಮಾನ್ಯ ಜನರು. ಮಕ್ಕಳು ವಿಶೇಷವಾಗಿ ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ನಾವು ಯುದ್ಧಗಳು ನಿಲ್ಲುವಂತೆ ಸದಾ ಪ್ರಾರ್ಥಿಸೋಣ. ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಯುದ್ಧಗಳನ್ನು ನಿಲ್ಲಿಸಲು ಶೀಘ್ರಗತಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಪೋಪ್ ಫ್ರಾನ್ಸಿಸ್ ಅವರು ಅಭಿಪ್ರಾಯಪಟ್ಟರು.
ಅಂತಿಮವಾಗಿ ನೆರೆದಿದ್ದ ಎಲ್ಲರ ಮೇಲೆ ದೇವರ ಕೃಪಾಶೀರ್ವಾದಗಳನ್ನು ಕೋರುತ್ತಾ, ಸದಾ ಮಾತೆ ಮರಿಯಮ್ಮನವರು ನಿಮ್ಮ ಹಾದಿಯನ್ನು ಮುನ್ನಡೆಸಲಿ ಎಂದು ಹೇಳಿದರು.