ಪೋಪ್ ಫ್ರಾನ್ಸಿಸ್: ಸರ್ಕಾರಗಳು ಬಡ ದೇಶಗಳ ಮೇಲಿನ ಸಾಲವನ್ನು ಮನ್ನಿಸಬೇಕು
ವರದಿ: ಅಂತೊನೆಲ್ಲಾ ಪಲೇರ್ಮೋ
ಪೋಪ್ ಫ್ರಾನ್ಸಿಸ್ ಅವರು ಬುಧವಾರದ ತಮ್ಮ ತ್ರಿಕಾಲ ಪ್ರಾರ್ಥನೆಯ ನಂತರ ವ್ಯಾಟಿಕನ್ ನಗರದಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಜ್ಯೂಬಿಲಿ ವರ್ಷದಲ್ಲಿ ಶ್ರೀಮಂತ ರಾಷ್ಟ್ರಗಳು ಬಡ ದೇಶಗಳಿಗೆ ನೀಡಿರುವ ಸಾಲವನ್ನು ಮನ್ನಿಸಬೇಕು ಅಥವಾ ಕನಿಷ್ಟ ಪಕ್ಷ ಅದನ್ನು ಕಡಿಮೆಗೊಳಿಸಬೇಕು ಎಂದು ವಿಶ್ವದ ರಾಜಕೀಯ ನಾಯಕರುಗಳಿಗೆ, ಸರ್ಕಾರದ ಮುಖ್ಯಸ್ಥರುಗಳಿಗೆ ಮನವಿಯನ್ನು ಮಾಡಿದ್ದಾರೆ.
"ವಿಶ್ವದ ವಿವಿಧ ರಾಷ್ಟ್ರಗಳ ಕ್ರೈಸ್ತ ನಾಯಕರುಗಳಾದರೂ ಸಹ ಈ ನಿಟ್ಟಿನಲ್ಲಿ ಕ್ರಮವನ್ನು ಕೈಗೊಂಡು ಕ್ರಿಸ್ತೀಯ ಸಂಪ್ರದಾಯ ಹಾಗೂ ಅನುಸರಣೆಯ ಮಾದರಿಯಾಗಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ನಾಯಕರುಗಳಿಗೆ ಕರೆ ನೀಡಿದ್ದಾರೆ.
ಶಾಂತಿ ಮತ್ತು ಸಂವಾದದಲ್ಲಿ ತೊಡಗಿಸಿಕೊಂಡವರ ಶ್ಲಾಘನೆ
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು "ಶಾಂತಿಗಾಗಿ ಸಂವಾದ ಹಾಗೂ ಮಾತುಕತೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ನೆನೆದು ಅವರನ್ನು ಅವರ ಮಹೋನ್ನತ ಕಾರ್ಯಕ್ಕಾಗಿ ಶ್ಲಾಘಿಸಿದ್ದಾರೆ. ಶಾಂತಿ ಹಾಗೂ ಸಂವಾದವನ್ನು ಏರ್ಪಡಿಸಲು ಶ್ರಮಿಸುತ್ತಿರುವ ವ್ಯಕ್ತಿಗಳು, ವಿಶೇಷವಾಗಿ ರಾಜತಾಂತ್ರಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವವರು, ಇನ್ನೂ ಪ್ರಮುಖವಾಗಿ ಅಪಾಯಕಾರಿ ಸನ್ನಿವೇಷಗಳಲ್ಲಿ ಹಾಗೂ ಪ್ರದೇಶಗಳಲ್ಲಿ ಶಾಂತಿಯ ದೂತರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ನಾನು ನನ್ನ ಹೃದಯಾಂತರಾಳದ ಧನ್ಯವಾದಗಳನ್ನು ಹಾಗೂ ದೇವರ ಕೃಪಾವರಗಳನ್ನು ಕೋರುತ್ತೇನೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಕ್ರೈಸ್ತ ನಾಯಕರು ಬಡ ದೇಶಗಳ ಸಾಲ ಮನ್ನಿಸಲಿ
ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಕ್ರೈಸ್ತ ನಾಯಕರುಗಳು ಬಡ ದೇಶಗಳ ಸಾಲವನ್ನು ಮನ್ನಿಸುವ ಮೂಲಕ ಅಥವಾ ಕನಿಷ್ಟ ಸಾಲದ ಮರು ಪಾವತಿಯ ಪ್ರಮಾಣವನ್ನು ಗುರುತರವಾಗಿ ತಗ್ಗಿಸುವ ಮೂಲಕ ಕ್ರಿಸ್ತೀಯ ಮನೋಭಾವವನ್ನು ಮೆರೆಯಬೇಕು. 2025 ಜ್ಯೂಬಿಲಿ ವರ್ಷವಾಗಿದ್ದು, ಜ್ಯೂಬಿಲಿ ವರ್ಷದ ವಿಶೇಷತೆ ಎಂಬುದು ಸಾಲವನ್ನು ಮನ್ನಿಸುವುದಾಗಿದೆ. ಸಂತ ಪೌಲರು ಹೇಳುವಂತೆ ನಾವೆಲ್ಲರೂ ಪರಸ್ಪರ ಮನ್ನಿಸಬೇಕು" ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.