ಗಾಝಾ ಕದನ ವಿರಾಮ ಒಪ್ಪಂದವನ್ನು ಸ್ವಾಗತಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಇಂದು ಸಂತ ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ಗಾಝಾ ಪ್ರದೇಶದಲ್ಲಿ ಕದನ ವಿರಾಮದ ಕುರಿತು ಆಗಿರುವ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಇನ್ನಾದರೂ ಜಗತ್ತಿನಲ್ಲಿ ಶಾಂತಿ ಮೂಡಲಿ ಎಂದು ಆಶಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು ಕೂಡಲೇ ಗಾಝಾ ಪ್ರದೇಶಕ್ಕೆ ಮಾನವೀಯ ನೆರವು ತಲುಪಲು ಎಲ್ಲಾ ರೀತಿಯ ಸಹಾಯವನ್ನು ಮಾಡಬೇಕು. ಎಲ್ಲಾ ಗಡಿಗಳನ್ನು ತೆರೆಯುವ ಮೂಲಕ ಇಲ್ಲಿನ ನೊಂದ ಜನತೆಗೆ ಸಹಾಯ ನೀಡಬೇಕು ಎಂದು ಅಂತರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ.
ಈ ನಡುವೆ ಕ್ಯೂಬಾ ದೇಶವು "ಜ್ಯೂಬಿಲಿ ವರ್ಷದ ಅಂಗವಾಗಿ ಬಂಧಿತರನ್ನು ಬಿಡುಗಡೆ ಮಾಡುತ್ತೇವೆ" ಎಂದು ಘೋಷಿಸಿದೆ. ಈ ಕುರಿತು ಪೋಪ್ ಫ್ರಾನ್ಸಿಸ್ ಅವರು ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದು, ಇಡೀ ವಾರವನ್ನು ಪ್ರಾರ್ಥನೆಯ ವಾರವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಈ ಕದನ ವಿರಾಮದ ಒಪ್ಪಂದದ ಕುರಿತು ಮಾತನಾಡಿ "ಈ ಒಪ್ಪಂದದಲ್ಲಿನ ಅಂಶವನ್ನು ಎಲ್ಲಾ ಪಕ್ಷಗಳು ಪಾಲಿಸಬೇಕು ಹಾಗೂ ಗೌರವಿಸಬೇಕು. ಆ ಮೂಲಕ ಇನ್ನಾದರೂ ಅಲ್ಲಿ ಶಾಶ್ವತವಾಗಿ ಶಾಂತಿಯನ್ನು ಮೂಡಲು ಸಹಕರಿಸಬೇಕು ಎಂದು ಹೇಳಿದ್ದಾರೆ.
ಶುಭಸಂದೇಶದ ಚಿಂತನೆ
ಪೋಪ್ ಫ್ರಾನ್ಸಿಸ್ ಅವರು ಇಂದು ಸಂತ ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಇಂದಿನ ಶುಭಸಂದೇಶದ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದ ಅವರು ಇಂದು ಕಾನಾ ಮದುವೆಯಲ್ಲಿ ದ್ರಾಕ್ಷಾರಸ ಮುಗಿದು ಹೋದಾಗ, ನೀರನ್ನು ದ್ರಾಕ್ಷಾರಸವನ್ನಾಗಿ ಪರಿವರ್ತಿಸುವ ಮೂಲಕ ಅವರು ತಮ್ಮ ಮೊದಲ ಸೂಚಕಕಾರ್ಯವನ್ನು ಮಾಡಿದರು. ಅಂತೆಯೇ, ನಮ್ಮ ಬದುಕಿನಲ್ಲಿ ನಮಗೆ ಬೇಕಾದುದನ್ನು ಅವರ ಬಳಿ ನಾವು ಕೇಳಿದಾಗ, ಅವರು ನಮಗೆ ಅನುಗ್ರಹಿಸುತ್ತಾರೆ ಏಕೆಂದರೆ ಅವರು ನಮ್ಮೊಡನೆ ಸೇರಿ ಹರ್ಷಿಸಲು ಇಚ್ಛಿಸುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಇಂದಿನ ಯೊವ್ವಾನನ ಶುಭಸಂದೇಶದ ದೈವವಾಕ್ಯದ ಮೇಲೆ ಚಿಂತನೆಯನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್ ಅವರು "ನಾವು ನಮ್ಮ ಬದುಕಿನಲ್ಲಿ ಅನೇಕ ಬಾರಿ ಹಲವನ್ನು ಎದುರು ನೋಡುತ್ತೇವೆ. ಬಹುತೇಕ ಸಲ ನಮ್ಮಲ್ಲಿ ಅಗತ್ಯವಾಗಿರುವ ಅಂಶಗಳು ಇರುವುದಿಲ್ಲ. ಈ ಸಂದರ್ಭದಲ್ಲಿ ನಾವು ಪ್ರಾರ್ಥನೆಯಲ್ಲಿ ವಿಶ್ವಾಸದಿಂದ ಕೇಳಿದರೆ, ದೇವರು ನಮಗೆ ಕರುಣಿಸುತ್ತಾರೆ. ತಮ್ಮ ಅನಂತ ದಯೆ ಹಾಗೂ ಆಪರಿಮಿತತ್ವದಿಂದ ಅವರು ನಮಗೆ ಬೇಕಾದುದನ್ನು ಅನುಗ್ರಹಿಸುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಹೇಳಿದ್ದಾರೆ.